ದಾವಣಗೆರೆ: ಯುವತಿಯನ್ನು ಚೂಡಾಯಿಸುತ್ತಿದ್ದ ಸ್ಥಳೀಯರು ಗೂಸಾ ಕೊಟ್ಟ ಘಟನೆ ನಗರದ ಜಯದೇವ ವೃತ್ತದ ಬಳಿ ಮಂಗಳವಾರ ನಡೆದಿದೆ.
ದಾವಣಗೆರೆ ನಿವಾಸಿ ಪ್ರಶಾಂತ್ ಯುವತಿಯನ್ನು ಚುಡಾಯಿಸಿದ ಯುವಕ. ಪ್ರಶಾಂತ್ ಕೋರಿಯರ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ. ಯುವತಿ ಕೂಡ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಶಾಂತ್ ಯುವತಿಗೆ ಕಿರಿಕಿರಿ ಮಾಡುತ್ತಿದ್ದ.
ಪ್ರಶಾಂತ್ ಈ ಹಿಂದೆ ನಾಲ್ಕು ಬಾರಿ ಯುವತಿಗೆ ಕಿರುಕುಳ ಕೊಟ್ಟಿದ್ದನ್ನು ಸ್ಥಳೀಯರು ನೋಡಿದ್ದರು. ಮಂಗಳವಾರ ಸಂಜೆ ಪ್ರಶಾಂತ್ ಚುಡಾಯಿಸಿದ್ದನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪ್ರಶಾಂತ್ ಪೋಷಕರು, ಸಂಬಂಧಿಕರು ಪೊಲೀಸ್ ಠಾಣೆಗೆ ದೌಡಾಯಿಸಿದರು. ಮತ್ತೆ ಇಂತಹ ತಪ್ಪು ನಡೆಯದಂತೆ ಮಗನಿಗೆ ಬುದ್ಧಿ ಹೇಳುತ್ತೇವೆ. ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿಕೊಂಡರು. ಅಷ್ಟೇ ಅಲ್ಲದೆ ಪ್ರಶಾಂತ್ ಯುವತಿಯ ಕ್ಷಮೆ ಕೇಳಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.