ಸ್ವಚ್ಛ ಪರಿಸರ ಗಾಂಧೀಜಿಯವರ ಕನಸು ಪರಿಸರ ಉಳಿಸಲು ಹಳೆಯ ಜೀವನ ಪದ್ಧತಿಗೆ ಮರಳಬೇಕಿದೆ : ವಿನೋತ್ ಪ್ರಿಯಾ

ಚಿತ್ರದುರ್ಗ ಜಿಲ್ಲಾ ಸುದ್ದಿ

ಚಿತ್ರದುರ್ಗ :
ಸ್ವಚ್ಛತೆ, ಸ್ವಾವಲಂಬನೆ, ಗ್ರಾಮಗಳ ಸಬಲೀಕರಣದಿಂದ ನಿರುದ್ಯೋಗ ನಿವಾರಣೆ ಇವೆಲ್ಲವೂ ಗಾಂಧೀಜಿಯವರ ಕನಸಾಗಿದ್ದು, ಪರಿಸರದ ಸಂರಕ್ಷಣೆಗಾಗಿ ಹಳೆಯ ಜೀವನ ಪದ್ಧತಿಗೆ ನಾವು ಮರಳುವ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಅವರು ಮಾತನಾಡಿದರು.
ಗಾಂಧೀಜಿ ಜಯಂತಿ ಎಂದರೆ ಮಕ್ಕಳು ಕೇವಲ ರಜೆಯ ಒಂದು ದಿನ ಎಂದೇ ಭಾವಿಸಿದಂತಿದೆ. ಗಾಂಧೀಜಿಯವರು ನಡೆದು ಬಂದ ಹಾದಿ, ಭಾರತದ ಸ್ವಾತಂತ್ರ್ಯ ಚಳುವಳಿ, ಅವರ ಬದುಕಿನ ರೀತಿ, ತತ್ವ ಸಿದ್ಧಾಂತಗಳು ಇವೆಲ್ಲವನ್ನೂ ಇಂದಿನ ಯುವ ಪೀಳಿಗೆ ಅರಿತುಕೊಳ್ಳುವ ಅಗತ್ಯವಿದೆ. ಆದರೆ ಈ ಕಾರ್ಯ ಶಾಲೆಗಳಲ್ಲಿ ಆಗುತ್ತಿಲ್ಲ. ಗಾಂಧೀಜಿ ಜಯಂತಿಯ ದಿನ ಶಾಲೆಗಳಿಗೆ ರಜೆ ಕೊಡುವ ಬದಲಿಗೆ, ಅವರ ಜೀವನ ಸಾಧನೆ, ತತ್ವ ಸಿದ್ಧಾಂತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಬದಲಾಗಬೇಕಿದೆ. ಗಾಂಧೀಜಿಯವರು ಗ್ರಾಮಗಳ ಸಬಲೀಕರಣ, ಸ್ವಾವಲಂಬನೆಯ ಬದುಕು, ವೈಯಕ್ತಿಕ ಸ್ವಚ್ಛತೆಯನ್ನು ಪ್ರತಿಪಾದಿಸಿದ್ದರು. ಹೀಗಾಗಿಯೇ ಅವರು ಸ್ವದೇಶಿ ಉತ್ಪನ್ನಗಳ ಬಳಕೆ, ಗುಡಿ ಕೈಗಾರಿಕೆಯ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಹತ್ತಿಯ ಬಟ್ಟೆಯ ಉತ್ಪನ್ನಗಳನ್ನೇ ಅವರು ದೈನಂದಿನ ಬದುಕಿನಲ್ಲಿ ಅವರು ಬಳಸುತ್ತಿದ್ದರು. ಆದರೆ ಜಾಗತೀಕರಣ ಹಾಗೂ ತಂತ್ರಜ್ಞಾನದ ದುರ್ಬಳಕೆಯಿಂದ ಪರಿಸರ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗುತ್ತಿದ್ದು, ಈ ಪೈಕಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವುದು ಸವಾಲಿನ ವಿಷಯವಾಗಿದೆ. ಸದ್ಯ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಜಿಲ್ಲೆಯಲ್ಲಿ ಕಾಣಸಿಗಬಾರದು. ಹೀಗಾಗಿ ಬಟ್ಟೆಯ ಬ್ಯಾಗ್‍ಗಳ ಬಳಕೆಗೆ ಜಿಲ್ಲಾಡಳಿತ ಉತ್ತೇಜನ ನೀಡುತ್ತಿದ್ದು, ಮತ್ತೊಮ್ಮೆ ನಾವು ಹಳೆಯ ಜೀವನ ಪದ್ದತಿಗೆ ಮರಳುವುದು ಅನಿವಾರ್ಯವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನೂ ಕೂಡ ನಾವು ಇಂದು ಸ್ಮರಿಸಲೇಬೇಕಿದ್ದು, ಅವರ ಸಾಧನೆ, ಪ್ರಾಮಾಣಿಕತೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ನಮ್ಮ ದೇಶದಲ್ಲಿ ಯಾವತ್ತೂ ನೆನಪಿನಲ್ಲಿಡಬೇಕಾದ ಹೆಮ್ಮೆಯ ನಾಯಕರು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂಧನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಳಲ್ಕೆರೆ ಪಟ್ಟಣ ಪಂಚಾಯತಿ ವತಿಯಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಸಹಕಾರದೊಂದಿಗೆ ಸಿದ್ಧಪಡಿಸಲಾಗಿರುವ ಬಟ್ಟೆ ಬ್ಯಾಗ್‍ಗಳಲ್ಲಿ ‘ಪ್ಲಾಸ್ಟಿಕ್ ಚೀಲ ಬಿಡೋಣ- ಬಟ್ಟೆ ಚೀಲ ಹಿಡಿಯೋಣ’ ಎಂಬ ಘೋಷವಾಕ್ಯವನ್ನು ನಮೂದಿಸಲಾಗಿದ್ದು, ಬಟ್ಟೆ ಬ್ಯಾಗ್‍ಗಳ ಬಳಕೆಗೆ ಉತ್ತೇಜನ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಿದರು.
ಗಾಂಧೀಜಿ ಜಯಂತಿ ಅಂಗವಾಗಿ ಸೈಂಟ್ ಜೋಸೆಫ್ ಶಾಲೆಯ ಮಕ್ಕಳ ತಂಡದಿಂದ ಸರ್ವಧರ್ಮ ಪ್ರಾರ್ಥನೆ, ರಘುಪತಿ ರಾಘವ ರಾಜಾ ರಾಂ, ವೈಷ್ಣವ ಜನತೋ ಗೀತ ಗಾಯನ ಪ್ರಸ್ತುತಪಡಿಸಲಾಯಿತು.

Leave a Reply

Your email address will not be published. Required fields are marked *