ಜೀವ ಉಳಿಸುವ ಜೊತೆ ಬಾಂಧವ್ಯ ಬೆಳೆಸುವ ರೋಚಕ ಭರಾಟೆ

ಸಿನಿಮಾ ಅಡ್ಡ
ಕಲಾವಿದರು- ಶ್ರೀಮುರಳಿ,ಶ್ರೀಲೀಲಾ
ನಿರ್ದೇಶಕ   – ಚೇತನ್ ಕುಮಾರ್
ಸಂಗೀತ –  ಅರ್ಜುನ್‌ ಜನ್ಯ
ತ್ರಿ ಮಿತ್ರ ನ್ಯೂಸ್  ಕಡೆಯಿಂದ =  3.5/5

ಶ್ರೀಮುರಳಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿದರೂ ಮಾಸ್ ಅವತಾರದಲ್ಲಿ ಮಿಂಚುತ್ತಾ ಬರುತ್ತಿದ್ದಾರೆ. ಉಗ್ರಂ ಚಿತ್ರದ ಮೂಲಕ ಶುರವಾಗಿದ್ದ ಆ ಹಂಗಾಮಾ ರಥಾವರ ಮತ್ತು ಮಫ್ತಿ ಮೂಲಕ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಹೀಗೆ ಸಾಗಿ ಬಂದಿರೋ ಶ್ರೀಮುರಳಿ ಭರಾಟೆಯಲ್ಲಿಯೂ ಮತ್ತದೇ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಈ ಹಿಂದೆಯೇ ಸಾಬೀತಾಗಿತ್ತು. ಆದರೆ ಟ್ರೇಲರ್ ಮೂಲಕ ಕಾಣಿಸಿದ್ದು ಮಾತ್ರ ಮತ್ತೊಂದು ಥರದ ಛಾಯೆ. ಯಾವ ಕ್ರಿಯಾಶೀಲ ನಟರೂ ಮತ್ತೆ ಮತ್ತೆ ಒಂದೇ ಥರದ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂಥಾ ಬದಲಾವಣೆಯ ಪರ್ವ ಕಾಲದಲ್ಲಿದ್ದ ಶ್ರೀಮುರಳಿಯೀಗ ಅತ್ಯಂತ ಭಿನ್ನವಾದ ಕಥೆ ಮತ್ತು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅಂಥಾ ಬದಲಾವಣೆಗೆ ಕಾರವಾಗಿರೋ ‘ಭರಾಟೆ’ ಇದೀಗ ಶುರುವಾಗಿದೆ.

ಸಾಮಾನ್ಯನೊಬ್ಬ ವಾಸ್ತವದ ಬದುಕಿನಲ್ಲಿ ಮಾಡಲು ಆಗದೇ ಇರುವಂತಹದ್ದನ್ನು, ಪಾತ್ರಗಳ ಮೂಲಕ ನೋಡಿ ತಾತ್ಕಾಲಿಕ ಖುಷಿಯನ್ನು ಅಪ್ಪಿಕೊಳ್ಳುವುದೇ ಸಿನಿಮಾ. ಈ ಫಾರ್ಮುಲಾ ಭರಾಟೆ ಚಿತ್ರಕ್ಕೆ ಬಹಳ ಸೊಗಸಾಗಿ ಹೊಂದಿಕೆಯಾಗುತ್ತದೆ. ಹಾಗಾಗಿ ಭರಾಟೆಯನ್ನು ಯಾವುದೇ ಲಾಜಿಕ್‌ಗಳನ್ನು ಹುಡುಕದೆ ಬರಿ ಮನರಂಜನೆಯ ದೃಷ್ಟಿಯಲ್ಲಷ್ಟೇ ಸಿನಿಮಾ ನೋಡಬೇಕು.

ಇದು ಬೊಬ್ಬಿರಿದು ಅಬ್ಬರಿಸಿದ ಶ್ರೀಮುರಳಿಯ ಭರ್ಜರಿ ಭರಾಟೆ ಅಂತ ನಿಸ್ಸಂಶಯವಾಗಿ ಯಾರಿಗಾದರೂ ಅನ್ನಿಸದಿರೋದಿಲ್ಲ. ಅಂಥಾ ರುಚಿಕಟ್ಟಾದ ಚಿತ್ರವನ್ನೇ ಚೇತನ್ ಕುಮಾರ್ ಕಟ್ಟಿ ಕೊಟ್ಟಿದ್ದಾರೆ. ಆರಂಭದಿಂದಲೂ ಇದೊಂದು ವಿಶೇಷವಾದ ಕಥೆಯ ಚಿತ್ರ ಎಂಬ ಬಗ್ಗೆ ಚಿತ್ರತಂಡ ಸುಳಿವುಗಳನ್ನು ಬಿಟ್ಟು ಕೊಡುತ್ತಲೇ ಬಂದಿತ್ತು. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಈ ಚಿತ್ರ ಶ್ರೀಮುರಳಿಯವರನ್ನು ಹಲವಾರು ಶೇಡುಗಳಲ್ಲಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವಲ್ಲಿ ಗೆದ್ದಿದೆ. ಥರ ಥರದ ಶೇಡುಗಳಿರೋ ಪಾತ್ರದ ಮೂಲಕ ಶ್ರೀಮುರಳಿ ಕೂಡಾ ಎಲ್ಲರೂ ಅಚ್ಚರಿಗೊಳ್ಳುವಂಥಾ ಅಭಿನಯ ನೀಡಿದ್ದಾರೆ.

ಭರಾಟೆಯ ಕಥೆ ತೆರೆದುಕೊಳ್ಳುವುದೇ ರಾಜಸ್ಥಾನದಿಂದ. ಇಲ್ಲಿ ಶ್ರೀಮುರಳಿ ಜಗನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈತನಿಗೆ ನಾಟಿ ಔಷಧದ ವಿದ್ಯೆ ಎಂಬುದು ತಂದೆಯಿಂದ ಬಂದ ಬಳುವಳಿ. ನಾನಾ ರೀತಿಯ ಕಾಯಿಲೆಗಳಿಗೆ ಈ ಮೂಲಕವೇ ಔಷಧಿ ಕೊಡುತ್ತಾ ಅದರ ನಡುವೆಯೇ ಪ್ರವಾಸಿಗರ ಪಾಲಿಗೆ ಗೈಡ್ ಆಗಿಯೂ ಜನ್ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಈ ನಾಟಿ ವೈದ್ಯ ಮತ್ತು ಗೈಡ್ ಕೆಲಸದ ನಡುವೆಯೇ ಜನುಮಾಂತರದ್ದೆಂಬಂತಿರೋ ವೈಶಮ್ಯದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಇದೇ ಹೊತ್ತಿನಲ್ಲಿ ಜಗನ್ ಕರ್ನಾಟಕಕ್ಕೆ ಪ್ರವೇಶಿಸುವಂಥಾ ಸಂದರ್ಭ ಸೃಷ್ಟಿಯಾಗುತ್ತೆ. ಅಲ್ಲೆಯೇ ತಾಜಸ್ಥಾನದಲ್ಲಿ ಗೈಡ್ ಆಗಿದ್ದಾಗ ಸಿಕ್ಕಿದ್ದ ಹುಡುಗಿ ಮತ್ತೆ ಮುಖಾ ಮುಖಿಯಾಗುತ್ತಾಳೆ.

ಅಲ್ಲಿಂದ ಗಾಢ ಪ್ರೇಮ ಮತ್ತು ನಖಶಿಖಾಂತ ಉರಿದು ಬೀಳುವಂಥಾ ದ್ವೇಷದ ಕಥಾನಕ ಗರಿಗೆದರಿಕೊಳ್ಳುತ್ತದೆ. ಅಲ್ಲಿಂದಾಚೆಗೆ ರೋಮ ರೋಮವೂ ನಿಮಿರಿಕೊಳ್ಳುವಂತಾ ಮಾಸ್ ಸನ್ನಿವೇಶಗಳು, ರೋಮಾಂಚನಗೊಳಿಸೋ ಪ್ರೇಮ ಸನ್ನಿವೇಶಗಳು ಮತ್ತು ಮನಮಿಡಿಯುವ ಕೌಟುಂಬಿಕ ಕಥನದೊಂದಿಗೆ ಕಥೆ ಮುಂದುವರೆಯುತ್ತೆ. ಮೊದಲೇ ತಿಳಿದಿರುವಂತೆ ಇಲ್ಲಿ ಖಳ ನಟರ ದಂಡೇ ಇದೆ. ಅವರೆಲ್ಲರ ಪಾತ್ರಗಳನ್ನೂ ಕೂಡಾ ಚೇತನ್ ಕುಮಾರ್ ಅಷ್ಟೇ ಆಸ್ಥೆಯಿಂದ ಎದುರಾಳಿಗಳ ಎದೆ ಅದುರುವಂತೆ ಕಟ್ಟಿ ಕೊಟ್ಟಿದ್ದಾರೆ. ಇದೊಂದು ಸಂಕೀರ್ಣವಾದ ಕಥೆ. ಒಂದೆಳೆ ಆಚೀಚೆಯಾದರೂ ಗೊತ್ತುಗುರಿಗಳೆಲ್ಲ ಚೆದುರಿ ಚೆಲ್ಲಾಪಿಲ್ಲಿಯಾಗುವ ದುರಂತವೆದುರಾಗುತ್ತಿತ್ತು. ಆದರೆ ಚೇತನ್ ಕುಮಾರ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಭರಾಟೆ ಎಂಬ ಪದದ ಅರ್ಥವೇ ಜೋರು. ಹಾಗಾಗಿ ನಿರ್ದೇಶಕರು ಈ ಸಿನಿಮಾದಲ್ಲಿ ಪ್ರತಿಯೊಂದು ವಿಷಯವನ್ನು ಜೋರಾಗಿಯೇ ತೋರಿಸಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್‌ ಬಣ್ಣ ಬಣ್ಣದ ಕಮಾನುಗಳಿಂತ, ತಳಿರು ತೋರಣಗಳಿಂದ ರಂಗು ರಂಗಿನ ಬಟ್ಟೆಗಳಿಮದ ಕಾಣುತ್ತದೆ. ವಿಲನ್‌ಗಳು ಬಳಸಿರುವ ಆಯುಧಗಳು ಸಹ ನಾವು ಇದುವರೆಗೂ ನೋಡಿರದ ಶೈಲಿಯಲ್ಲಿವೆ.

ರಾಜಸ್ಥಾನವಾಗಲಿ, ಬೆಂಗಳೂರಾಗಲಿ, ಹಾಸನವಾಗಲಿ, ಬಾದಮಿಯಾಗಲಿ, ಕಡೆಗೆ ಸ್ವಿಟ್ಜರ್‌ಲೆಂಡ್‌ ಆಗಲಿ ಎಲ್ಲ ಕಡೆಯೂ ಬಣ್ಣ ಬಣ್ಣ ಬಣ್ಣ. . ಈ ಸಿನಿಮಾದಲ್ಲಿ ಏನಿಲ್ಲ ಎಂದು ಕೇಳುವ ಹಾಗೆ ಇಲ್ಲ ಪ್ರೀತಿ, ಸ್ನೇಹ, ಸಂಬಂಧ, ಕುಟುಂಬ ಕಾಳಗ, ಸಹೋದರತ್ವ, ವಾರಸತ್ವ, ದ್ವೇಷ, ಯುದ್ಧ, ಪಾಳೇಗಾರರು, ಬಲಗೈ ಭಂಟರು, ಸುಂದರಿಯರು, ಭವಿಷ್ಯ ನುಡಿಯವ ಜ್ಯೋತಿಷಿಗಳು, ಅಘೋರಿಗಳು ಹೀಗೆ ಎಲ್ಲವೂ ತುಂಬಿ ಸಿನಿಮಾ ಬಹು ದೊಡ್ಡ ಕ್ಯಾನ್ವಾಸ್‌ ಆಗಿದೆ. ಇಷ್ಟು ದೊಡ್ಡ ಕ್ಯಾನ್ವಾಸ್‌ಗೆ ಬಂಡವಾಳ ಹೂಡಿರುವ ಸುಪ್ರಿತ್‌ ಸಹ ಅಭಿನಂದಾರ್ಹರು.

ಶ್ರೀಮುರುಳಿ ಲವ್‌ ಮಾಡಬೇಕಾದ್ರೆ ಪಕ್ಕಾ ಲವರ್‌ ಬಾಯ್, ಫೈಟ್‌ ಮಾಡಬೇಕಾದ್ರೆ ಫೈಟರ್‌, ಕೆಲವೆಡೆ ನಿಶ್ಯಬ್ಧವಾಗಿದ್ದುಕೊಂಡೆ ನಟಿಸಿದ್ದಾರೆ. ಶ್ರೀಲೀಲಾ ಎಷ್ಟು ಸುಂದರವಾಗಿದ್ದಾರೋ, ಅಷ್ಟೇ ಮುದ್ದಾಗಿ ನಟಿಸಿದ್ದಾರೆ. ತಾರಾ ಎಂದಿನಂತೆ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಮದರ್‌. ತಾಯಿ ಪಾತ್ರಕ್ಕೆ ಇವರೇ ಬೆಸ್ಟ್‌ ಎನ್ನಿಸುವಂತೆ ನಟಿಸಿದ್ದಾರೆ. ಗಿರಿ, ಅಲೋಕ್‌, ಸಾಧುಕೋಕಿಲಾ ಸೇರಿದಂತೆ ಸಾಕಷ್ಟು ಮಂದಿ ನಗಿಸುವ ಪ್ರಯತ್ನ ಮಾಡಿದ್ದಾರೆ. ರವಿಶಂಕರ್‌, ಅಯ್ಯಪ್ಪ ಶರ್ಮಾ, ಸಾಯಿಕುಮಾರ್‌ ಎಲ್ಲರೂ ಆಗಾಗ ಅಬ್ಬರಿಸುತ್ತಲೇ ಇರುತ್ತಾರೆ. ಅವಿನಾಶ್‌, ರಾಜ್‌ ದೀಪಕ್‌ ಶೆಟ್ಟಿ, ಉಗ್ರಂ ಮಂಜು, ವಾಣಿಶ್ರೀ, ಧರ್ಮ, ಚೇತನ್‌, ಶರತ್‌ ಲೋಹಿತಾಶ್ವ ಹೀಗೆ ಇಡೀ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಎಲ್ಲ ಪೋಷಕ ಕಲಾವಿದರನ್ನು ನಿರ್ದೇಶಕ ಚೇತನ್‌ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಅರ್ಜುನ್‌ ಜನ್ಯ ಸಂಗೀತದಲ್ಲಿ ಎಲ್ಲ ಹಾಡುಗಳು ಚೆನ್ನಾಗಿವೆ. ಸಿನಿಮಾಟೋಗ್ರಫರ್‌ ಕೆಲಸವೂ ಅದ್ಭುತವಾಗಿದೆ

ಭರಾಟೆ ಆ್ಯಕ್ಷನ್‌ ಪ್ರಿಯರಿಗೆ, ಕೌಟುಂಬಿಕ ಸಿನಿಮಾಗಳನ್ನು ಇಷ್ಟಪಡುವವರಿಗೆ, ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ಮೆಚ್ಚಿಕೊಳ್ಳುವವರಿಗೆ ಮತ್ತು ಶ್ರೀಮುರುಳಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

Leave a Reply

Your email address will not be published. Required fields are marked *