ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಜಾ

ಕ್ರೈಂ ಜಿಲ್ಲಾ ಸುದ್ದಿ

ಹುಬ್ಬಳ್ಳಿ: ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ಸೋಮವಾರ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತಿಳಿಸಿದೆ. ದೇಶದ್ರೋಹ ಪ್ರಕರಣದ ಅಡಿ ನ್ಯಾಯಾಂಗ ಬಂಧನದಲ್ಲಿರುವ ಅಮೀರ್‌ ವಾನಿ, ತಾಲಿಬ್‌ ಮಜೀದ್‌ ಮತ್ತು ಬಾಸಿತ್‌ ಸೋಫಿ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಧೀಶ ಕೆ.ಎನ್‌.ಗಂಗಾಧರ ತೀರ್ಪು ನೀಡಿದರು.
ಆರೋಪಿಗಳಿಗೆ ಜಾಮೀನು ನೀಡುವಂತೆ ಮಾ.5ರಂದು ಬೆಂಗಳೂರಿನ ವಕೀಲ ಬಿ.ಟಿ.ವೆಂಕಟೇಶ್‌ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸರ್ಕಾರಿ ಅಭಿಯೋಜಕರಾದ ಸುಮಿತ್ರಾ ಎಂ.ಅಂಚಟಗೇರಿ ವಾದ ಮಂಡಿಸಿ, ಪ್ರಕರಣ ತನಿಖಾ ಹಂತದಲ್ಲಿದೆ. ಅಲ್ಲದೆ, ಮೂವರು ಆರೋಪಿಗಳು ಹೊರ ರಾಜ್ಯದ ನಿವಾಸಿಗಳಾದ ಕಾರಣ ಜಾಮೀನು ದೊರೆತಲ್ಲಿ ಮುಂದೆ ತನಿಖೆಗೆ ಸಹಕರಿಸದೆ ಇರುವ ಸಾಧ್ಯತೆ ಇದೆ ಎಂದು ಸರ್ಕಾರದ ಪರ ವಾದಿಸಿದ್ದರು. ಅಂದು ವಾದ ಆಲಿಸಿದ ನ್ಯಾಯಾಲಯವು ಮಾ.9ಕ್ಕೆ ತೀರ್ಪು ಕಾಯ್ದಿರಿಸಿತ್ತು.
ಮೂವರು ಆರೋಪಿಗಳು ಫೆ.14ರಂದು ಹುಬ್ಬಳ್ಳಿಯ ಕೊಟಗುಣಸಿ ಬಳಿಯ ಕೆಎಲ್‌ಇ ಪ್ರೇರಣಾ ಹಾಸ್ಟೆಲ್‌ನಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿ, ಪಾಕಿಸ್ತಾನದ ಗೀತೆಗೆ ಧ್ವನಿಗೂಡಿಸಿ ಮಾಡಿದ ವಿಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಫೆ.16ರಂದು ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಭದ್ರತಾ ದೃಷ್ಟಿಯಿಂದ ಆರೋಪಿಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಪ್ರಕರಣ ಗ್ರಾಮೀಣ ಠಾಣೆಗೆ ವರ್ಗಾವಣೆ ಆಗಿದ್ದು, ತನಿಖೆ ನಡೆಯುತ್ತಿದೆ. ಮಾ.13ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *